ವಾರ್ಷಿಕ ಕ್ರೀಡಾಕೂಟ ಮತ್ತು DPL - 2017 ಕ್ರಿಕೆಟ್ ಟೂರ್ನಮೆಂಟ್: ಪ್ರೀತಿ - ವಿಶ್ವಾಸವನ್ನು ಬೆಳೆಸುವುದೇ ಕ್ರೀಡೆಯ ಉದ್ದೇಶ : ಸುರೇಶ್ ಡಿ. ಪಡುಕೋಣೆ.
ಮುಂಬಯಿ : ಕ್ರೀಡೆ ಎನ್ನುವುದು ಸ್ಪರ್ಧಿಗಳ ಹಾಗೂ ಪಾಲಕರ ಮನೋಬಲವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಸ್ಪರರಲ್ಲಿ ಪ್ರೀತಿ - ವಿಶ್ವಾಸವನ್ನು ಬೆಳೆಸುವುದೇ ಕ್ರೀಡೆಯ ಉದ್ದೇಶವಾಗಿದ್ದು, ಎಲ್ಲರೂ ಕ್ರೀಡೆಯ ಹಿತಾಸಕ್ತಿಗೆ ಅನುಗುಣವಾಗಿ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು. ನಮ್ಮ ಸಮಾಜದಲ್ಲಿರುವ ಒಗ್ಗಟ್ಟನ್ನು ಯಾವುದೇ ಕಾರಣಕ್ಕೂ ಒಡೆಯಲು ಅವಕಾಶ ಕೊಡದೆ, ನಾವೆಲ್ಲರೂ ಮುಂದಿನ ಜನಾಂಗಕ್ಕೆ ಮಾದರಿಯಾಗುವಂತೆ ಇರಬೇಕು. ಸಮಸ್ತ ದೇವಾಡಿಗ ಬಾಂಧವರು ತಮ್ಮ ಸಮಾಜದ ಬಗ್ಗೆ ಗೌರವ ಭಾವವನ್ನು ಹೊಂದುವುದರೊಂದಿಗೆ ನಮ್ಮ ಸಂಘಕ್ಕೂ ಕೂಡ ನಿಮ್ಮಲ್ಲಿಯ ಉತ್ತಮ ಸಲಹೆ ಸೂಚನೆಗಳೊಂದಿಗೆ ಬಂದು, ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಘದ ಅಭ್ಯುದಯಕ್ಕೆ ಸಹಕರಿಸಬೇಕೆಂದು ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ ಗೌ. ಅಧ್ಯಕ್ಷರಾದ ಶ್ರೀ. ಸುರೇಶ್ ಡಿ. ಪಡುಕೋಣೆ ಕರೆನೀಡಿದರು.
ಮುಂಬಯಿಯ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ (ರಿ) ಮುಂಬಯಿ ವತಿಯಿಂದ ನವೆಂಬರ್ 26 ರಂದು ಖಾಲ್ಸಾ ಕಾಲೇಜ್ ಮೈದಾನ ಮಾತುಂಗ ಇಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಮತ್ತು DPL - 2017 ಕ್ರಿಕೆಟ್ ಟೂರ್ನಮೆಂಟ್ ಅನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಕ್ರಿಕೆಟ್ ಪಂದ್ಯಾಟಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಕ್ರೀಡಾಳುಗಳನ್ನು ಉದ್ದೇಶಿಸಿ ಶ್ರೀ. ಸುರೇಶ್ ಡಿ. ಪಡುಕೋಣೆಯವರು ಮಾತನಾಡಿದರು.ಅಂದು ಬೆಳಿಗ್ಗೆ 8.30 ರಿಂದ ಆರಂಭಗೊಂಡ ಕ್ರೀಡಾಕೂಟದಲ್ಲಿ ದೇವಾಡಿಗ ಬಾಂಧವರಿಗಾಗಿ ಕ್ರಿಕೆಟ್ ಮತ್ತು ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು.ವಿಶೇಷವಾಗಿ DPL - 2017 ಕ್ರಿಕೆಟ್ ಟೂರ್ನಮೆಂಟ್ ನ ಅಂತಿಮ ಸುತ್ತಿನಲ್ಲಿ ಗಣೇಶ್ ದೇವಾಡಿಗ ನೇತೃತ್ವದ 'ರೈಸಿಂಗ್ XI' ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸುಧೀರ್ ಬಿಜೂರ್ ನೇತೃತ್ವದ 'ಬಿಜೂರ್ ಫ್ರೆಂಡ್ಸ್' ತಂಡ ರನ್ನರ್ ಅಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದಲ್ಲಿ ಸಂಘದ ಗೌ. ಉಪಾಧ್ಯಕ್ಷ ನಾಗರಾಜ್ ಡಿ. ಪಡುಕೋಣೆ, ಸಂಘದ ಅಧ್ಯಕ್ಷರಾದ ಶ್ರೀ. ಸುಬ್ಬ ಜಿ. ದೇವಾಡಿಗ, ಉಪಾಧ್ಯಕ್ಷರಾದ ಶ್ರೀ. ಎನ್. ಎನ್. ದೇವಾಡಿಗ, ಗೌ.ಪ್ರ. ಕಾರ್ಯದರ್ಶಿ ಶ್ರೀ ಬಿ.ಎಂ. ದೇವಾಡಿಗ, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ. ಎಸ್,ವಿ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸೀತಾ ಎಂ. ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ ಎಸ್. ದೇವಾಡಿಗ, ಕ್ರೀಡಾ ವಿಭಾಗದ ಅಧ್ಯಕ್ಷ ಶ್ರೀ. ರವೀಂದ್ರ ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ಉಮೇಶ್ ಆರ್. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ವಿವಿಧ ವಯೋಮಾನದವರಿಗೆ ಹಾಗೂ ಚಿಕ್ಕ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದು, ಹೆಚ್ಚಿನ ದೇವಾಡಿಗ ಬಾಂಧವರು ಇದರಲ್ಲಿ ಭಾಗವಹಿಸಿದರು.ಈ ವರ್ಷದ ಕ್ರೀಡಾಕೂಟಕ್ಕೆ ಪ್ರಾಯೋಜಕತ್ವವನ್ನು ವಹಿಸಿಕೊಂಡ ಹಾಗೂ ಕ್ರೀಡಾಕೂಟಕ್ಕೆ ಜಾಹಿರಾತು ನೀಡಿ ಸಹಕರಿಸಿದ ಎಲ್ಲರಿಗೂ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಕ್ರಿಕೆಟ್ ಪಂದ್ಯಾಟದ ತೀರ್ಪುಗಾರರಾಗಿ ಸಹಕರಿಸಿದ ದಾರ ದೇವಾಡಿಗ ಮತ್ತು ಹರೀಶ್ ಉಪ್ರಳ್ಳಿ ಹಾಗೂ ವೀಕ್ಷಕ ವಿವರಣೆಗಾರರಾಗಿ ಸಹಕರಿಸಿದ ಯುವರಾಜ್ ಶೆಟ್ಟಿ ಮತ್ತು ಹರೀಶ್ ಪೂಜಾರಿ ಇವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.ವಾರ್ಷಿಕೋತ್ಸವಕ್ಕೂ ಮೊದಲು ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಡ್ರಾಯಿಂಗ್ ಸ್ಪರ್ಧೆಗಳನ್ನು 24 ಡಿಸೇಂಬರ್ 2017 ರಂದು ಮಧ್ಯಾಹ್ನ 2 ಗಂಟೆಯಿಂದ 6 ಗಂಟೆಯವರೆಗೆ ಮೈಸೂರು ಅಸೋಸಿಯೇಷನ್ ಮಾತುಂಗ ಇಲ್ಲಿ ಆಯೋಜಿಸಲಾಗಿದೆ.ಕ್ರಿಕೆಟ್ ಹಾಗು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜನವರಿ 14 ರಂದು ಎನ್.ಕೆ.ಇ.ಎಸ್. ಪ್ರೌಢಸಾಲೆ, ಇಂದೂಲಾಲ್ ಭುವಾ ಮಾರ್ಗ್, ವಡಾಲ, ಮುಂಬಯಿ ಇಲ್ಲಿ ನಡೆಯುವ ಸಂಘದ 30 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಗುವುದು.ಈ ಕಾರ್ಯಕ್ರಮದಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಶ್ವಿಗೊಳಿಸಬೇಕಾಗಿ ಸಂಘದ ಕಾರ್ಯಕಾರಿ ಸದಸ್ಯರು ವಿನಂತಿಸಿದ್ದಾರೆ.ಕ್ರೀಡಾಕೂಟದ ಪ್ರಯುಕ್ತ ಬೆಳಿಗ್ಗೆ ಲಘು ಉಪಾಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
















