ಮುಂಬಯಿ, ಜ. 9- ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ 37ನೇ ವಾರ್ಷಿಕೋತ್ಸವ ಸಮಾರಂಭವು ಜ. 5 ರಂದು ರವಿವಾರ ಮೈಸೂರ್ ಅಸೋಸಿಯೇಷನ್, ಮಾಟುಂಗಾ ಇಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಹಾಲಕ್ಷ್ಮೀ ನಾಗರಾಜ್ ದೇವಾಡಿಗ ಇವರ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸಮಾರಂಭವನ್ನು ಮುಖ್ಯ ಅತಿಥಿ, ದೇವರಾಯ ಎಂ. ಶೇರೆಗಾರ್ (ಆಡಳಿತ ನಿರ್ದೇಶಕರು – ದೇವು ಟೂಲ್ಸ್ ಪ್ರೈ. ಲಿ.,) ಗೌರವ ಅತಿಥಿಯಾಗಿ ಕೃಷ್ಣ ವೈ. ಶೆಟ್ಟಿ (ಆಡಳಿತ ನಿರ್ದೇಶಕರು – ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ) ಉಪಸ್ಥಿತರಿದ್ದು ದೀಪ ಪ್ರಜ್ವಲಿಸುವ ಮೂಲಕ ಉದ್ಭಾಟಿಸಿದರು.
ವೇದಿಕೆಯಲ್ಲಿ ಸಂಘದ ಗೌ. ಅಧ್ಯಕ್ಷರಾದ ನಾಗರಾಜ್ ಡಿ. ಪಡುಕೋಣೆ ಮತ್ತು ಶ್ರೀಮತಿ ಕುಸುಮ ನಾಗರಾಜ್ ಡಿ. ಪಡುಕೋಣೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ, ಉಪಾಧ್ಯಕ್ಷ ಭಾಸ್ಕರ್ ದೇವಾಡಿಗ, ಗೌ. ಪ್ರ. ಕಾರ್ಯದರ್ಶಿ ಬಿ.ಎಂ. ದೇವಾಡಿಗ ಹಾಗೂ ಗೌ. ಕೋಶಾಧಿಕಾರಿ ಮಂಜುನಾಥ್ ದೇವಾಡಿಗ, ಜೂತೆ ಕಾರ್ಯದರ್ಶಿ ಪ್ರಭಾಕರ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ,ಉಪಾಧ್ಯಕ್ಷೆ ಸುಶೀಲಾ ಎಸ್. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ದೇವರಾಯ ಎಂ. ಶೇರೆಗಾರ್ ಮಾತನಾಡಿ, ಇಂದಿನ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರೆದು ಸನ್ಮಾನಿಸಿದ ನಿಮಗೆಲ್ಲರಿಗೂ ನಾನು ಅಭಾರಿಯಾಗಿರುವೆ. ಸದಸ್ಯರು ಯಾವಾಗಲೂ ತಮ್ಮ ಮಕ್ಕಳನ್ನು ಈ ರೀತಿಯ ಕಾರ್ಯಕ್ರಮಕ್ಕೆ ತರಲು ಪ್ರಯತ್ನಿಸಿ, ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವತ್ತ ಪ್ರಯತ್ನ ಮಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಕೃಷ್ಣ ವೈ. ಶೆಟ್ಟಿ ಶುಭ ಹಾರೈಕೆಗಳನ್ನು ನೀಡಿದರು.
ಸಂಘದ ಅಧ್ಯಕ್ಷ ಸುಬ್ಬಾ ಜಿ. ದೇವಾಡಿಗರ ಅಧ್ಯಕ್ಷತೆಯಲ್ಲಿ ನೆರವೇರಿದ ಈ ವಾರ್ಷಿಕೋತ್ಸವ ಸಮಾರಂಭ ಅಂದು ಬೆಳಿಗ್ಗೆ ದೇವಾಡಿಗ ಸಮಾಜ ಬಾಂಧವರಿಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಗೆ ಡ್ರಾಯಿ೦ಗ್, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ , ವಿವಿಧ ವಯೋಮಿತಿಯ ಸ್ಪರ್ಧಾಳುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಸ್ಪರ್ಧೆಯ ತೀರ್ಪುಗಾರರಾಗಿ ಮಾಲಾ ಮಾಧವ ಮೇಸ್ತ ಮತ್ತು ಸುಚಿತಾ ಕೆ. ಶೆಟ್ಟಿ ಇವರುಗಳು ಸಹಕರಿಸಿದರು. ಇವರಿಗೆ ಸ೦ಘದ ಪರವಾಗಿ ಅಧ್ಯಕ್ಷರು ಹೂಗುಚ್ಛ ನೀಡಿ ಗೌರವಿಸಿದರು.
ಸಂಘದ ಕಾರ್ಯರೂಪಗಳ ಕುರಿತು ಜೂತೆ ಕಾರ್ಯದರ್ಶಿ ಪ್ರಭಾಕರ ದೇವಾಡಿಗ ಹಾಗೂ ಅತಿಥಿಗಳ ಪರಿಚಯವನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಿ.ಎಂ. ದೇವಾಡಿಗರು ಮಾಡಿದರು. ಮಹಿಳಾ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ಹಾಗೂ ಯುವ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಅಧ್ಯಕ್ಷ ರವೀಂದ್ರ ದೇವಾಡಿಗ ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಕು. ಮಂಜುಳಾ ಮತ್ತು ಕು. ಭಾಗ್ಯಶ್ರೀ ಹಾಗೆಯೇ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಶೀಲಾ ಎಸ್. ದೇವಾಡಿಗ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ಸ್ಫರ್ಧಾ ವಿಜೇತರಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಸದಸ್ಯರಿಂದ ಹಳದಿ ಕುಂಕುಮ ಕಾರ್ಯಕ್ರಮ ನೆರವೇರಿದವು. ನಂತರ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತರಿಗೆ ವಿಶೇಷವಾಗಿ ಗೌರವಿಸಲಾಯಿತು. ಅಂತಿಮವಾಗಿ ಸುರೇಶ್ ಕೆ. ದೇವಾಡಿಗರು ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.