ಮುಂಬಯಿ: ಇತ್ತೀಚೆಗೆ ನಿಧನರಾದ ದೇವಾಡಿಗ ವೆಲ್ ಫೇರ್ ಅಸೋಸಿಯೇಶನ್ ಮುಂಬೈನ ಗೌರವಾಧ್ಯಕ್ಷರಾಗಿದ್ದ ಸುರೇಶ್ ಡಿ. ಪಡುಕೋಣೆ ಅವರಿಗೆ ಶ್ರದ್ಧಾಂಜಲಿ ಮುಂಬಯಿನ ಮಾಟುಂಗದಲ್ಲಿರುವ ಮೈಸೂರ್ ಅಸೋಸಿಯೇಶನ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು.
ಮುಂಬೈ ದೇವಾಡಿಗ ವೆಲ್ಪೇರ್ ಅಸೋಸಿಯೇಶನ್ ಗೌರವಾಧ್ಯಕ್ಷ ನಾಗರಾಜ ಡಿ. ಪಡುಕೋಣೆ ಮಾತನಾಡಿ, ಸುರೇಶ್ ಪಡುಕೋಣೆಯವರೊಂದಿಗೆ ಪಳಗಿದವರು ಜೀವನದಲ್ಲಿ ಯಶಸ್ವಿಯಾಗಿ ಬೆಳೆದಿದ್ದಾರೆ.ದೇವಾಡಿಗ ಸಂಘದ ಜೀವಾಳರಾಗಿದ್ದ ಪಡುಕೋಣೆಯವರು ಯುವಕರಿಗೆ ಮಾದರಿ. ಅಪಾರ ಧಾರ್ಮಿಕ ಪ್ರಜ್ಞೆಯುಳ್ಳವರಾಗಿದ್ದ ಅವರು ಸಮಾಜಮುಖಿ ಚಿಂತನೆ ಅಳವಡಿಸಿಕೊಂಡಿದ್ದರು ಎಂದರು.
ದೇವಾಡಿಗ ಅಕ್ಷಯ ಕಿರಣ್ ಫೌಂಡೇಶನ್ ಪ್ರಮುಖರಾದ ಗಣೇಶ್ ದೇವಾಡಿಗ ಮುಂಬೈ ಮಾತನಾಡಿ, ಸಮಾಜದಲ್ಲಿ ಸೇವಾಕೈಂಕರ್ಯಗಳನ್ನು ಮಾಡಿದ ಸುರೇಶ್ ಡಿ. ಪಡುಕೋಣೆ ಕುಂದಾಪುರದ ಆಸ್ಮಿತೆಯೆಂದರೆ ತಪ್ಪಾಗಲಾರದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಆದರ್ಶ ಜೀವನ ನಡೆಸಿದರೆ ಅದುವೇ ನಿಜವಾದ ಶ್ರದ್ಧಾಂಜಲಿ ಎಂದರು.
ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಮಾತನಾಡಿ, ಪಡುಕೋಣೆಯವರೊಂದಿಗೆ ಒಂದೂವರೆ ದಶಕಗಳ ಒಡನಾಟ ಇದ್ದಿತ್ತು. ಕುಂದಾಪುರದಲ್ಲಿ ದೇವಾಡಿಗ ಸಮಾಜ ಭವನ ನಿರ್ಮಿಸಿ ಆ ಮೂಲಕ ಸತ್ಕಾರ್ಯ ಮಾಡುವ ಚಿಂತನೆ ಮಾಡಿದ್ದರು. ದೇವಾಡಿಗ ಸಂಘಕ್ಕೆ ಸ್ವಂತ ಜಾಗ ಕೊಳ್ಳಲು ಇವರು ಸಹಕಾರ ನೀಡಿದ್ದರು.
ಅಣ್ಣಯ್ಯ ಶೇರಿಗಾರ್ ಮಾತನಾಡಿ, ಸಮಾಜಕ್ಕೆ ಸ್ಪೂರ್ತಿಯಾಗಿದ್ದರು. ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ವೇಳೆ ಟ್ರಸ್ಟಿಯಾಗಿ ಮುಂಚೂಣಿಯಲ್ಲಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಮುಂಬೈ ದೇವಾಡಿಗ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ ಮಾತನಾಡಿ, ದೇವಾಡಿಗ ಸಮಾಜದಲ್ಲಿ ಮುಂಚೂಣಿಗರಾಗಿ ಕೆಲಸ ಮಾಡಿದ್ದು ಅವರ ನಿಧನ ಸಂಘಕ್ಕೆ ದೊಡ್ಡ ಆಘಾತವುಂಟು ಮಾಡಿದೆ ಎಂದು ಭಾವುಕರಾಗಿ ನುಡಿದರು.
ಜನಾರ್ಧನ ಉಪ್ಪುಂದ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಉದ್ಯಮ ಕ್ಷೇತ್ರದಲ್ಲಿ ಪಡುಕೋಣೆಯವರು ಎಲ್ಲರಿಗೂ ಪ್ರೇರಣೆಯಾಗಿದ್ದರು. ಜೀವನ ಸ್ಪೂರ್ತಿ ತುಂಬುವ ವ್ಯಕ್ತಿತ್ವವುಳ್ಳವರಾಗಿದ್ದ ಅವರ ನಿಧನ ಅಪಾರ ನೋವುಂಟು ಮಾಡಿದೆ ಎಂದರು.