ಜನಪ್ರಿಯ ಮುಂದಾಳು ಸುರೇಶ್ ಡಿ ಪಡುಕೋಣೆ ಅವರಿಗೆ ಕೋ.ಮ ಕಾರಂತ ಪ್ರಶಸ್ತಿ ಪ್ರಧಾನ ಕುಂದಾಪುರದ ಪ್ರಸಿದ್ಧ ವಾರಪತ್ರಿಕೆ ಕುಂದಪ್ರಭ ಸಂಸ್ಥೆಯ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಕೋ. ಮ. ಕಾರಂತ ಪ್ರಶಸ್ತಿ ಪ್ರಧಾನ ಸಮಾರಂಭ ಜನವರಿ 24 ರಂದು ಸಂಜೆ 4 ಗಂಟೆಗೆ ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆಯಿತು. ಎ.ಜಿ ಕೊಡ್ಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಉದ್ಯಮಿ, ದಾನಿ ಸುರೇಶ್ ಡಿ. ಪಡುಕೋಣೆ ಅವರಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅವರು ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಿದರು.
ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ, ಲಾಂಛನ ಬಿಡುಗಡೆಗೊಳಿಸಿದರು. ಹಿರಿಯ ಪತ್ರಕರ್ತ ಎ.ಎಸ್.ಎನ್. ಹೆಬ್ಟಾರ್ ಅಭಿನಂದನಾ ಭಾಷಣ ಮಾಡಿದರು. ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ ಸ್ವಾಗತಿಸಿ, ಪ್ರಸ್ತಾವನೆಗೈದರು.ಲೇಖಕ ಕೋ.ಶಿ. ಕಾರಂತ ಸಮ್ಮಾನ ಪತ್ರ ವಾಚಿಸಿದರು. ಪ್ರಾಧ್ಯಾಪಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಜಯವಂತ ಪೈ ವಂದಿಸಿದರು.ಈ ಸಂದರ್ಭದಲ್ಲಿಉಪ್ಪುಂದ ದೇವಾಡಿಗ ಸಂಘದ ಅದ್ಯಕ್ಷರು ಪದಾಧಿಕಾರಿಗಳು,ಕುಂದಾಪುರ ದೇವಾಡಿಗ ಸಂಘದವರು,ಮುಂಬೈ ದೇವಾಡಿಗ ಸಂಘದವರು ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.ಸುರೇಶ್ ಡಿ ಪಡುಕೋಣೆ ಅವರು ಆಟೋ ಮೊಬೈಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮ ಪಡೆದರು. ಸ್ವಂತ ಉದ್ಯಮದ ಮೂಲಕ ಸಾಧನೆ ಮಾಡಬೇಕು ಎಂಬ ಛಲದಿಂದ ಉದ್ಯಮ ಆರಂಭಿಸಿದರು. ಅಪೋಲೋ ಬೋರಿಂಗ್ ವಕ್ರ್ಸ್, ಗ್ರಾಹಕರ ಮೆಚ್ಚುಗೆ ಗಳಿಸಿತು. ಮುಂಬೈ ಮಾತ್ರವಲ್ಲ ವಿದೇಶದಲ್ಲೂ ಬೇಡಿಕೆ ಪಡೆಯಿತು. ಸಂಪಾದನೆ ಮಾಡಿದ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಮುಖ್ಯವಾಗಿ ಊರಿನ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಾನು ಕ್ರಿಯಾಶೀಲನಾಗಿ ಪಾಲ್ಗೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇರಿಸಿಕೊಂಡವರು ಅವರು. ಆರಂಭದಲ್ಲಿ ಪಡುಕೋಣೆಯ ಕ್ರೀಡಾ ಪಂದ್ಯಗಳನ್ನು ಪರಿಸರದ ಗ್ರಾಮಸ್ಥರಿಗೆ ಪ್ರತಿವರ್ಷ ಏರ್ಪಡಿಸುವ ಮೂಲಕ ಯುವಕರಲ್ಲಿ ಉತ್ಸಾಹ ತುಂಬಿದವರು. ಪಡುಕೋಣೆಯ ಮಹಾವಿಷ್ಣು ದೇವಸ್ಥಾನದ ಜೀರ್ಣೊದ್ದಾರದಲ್ಲಿ ಪಾಲ್ಗೊಂಡರು. ಲಕ್ಷ್ಮೀ ಗಣಪತಿ, ಮಹೇಶ್ವರ ದೇವರ ಗುಡಿಗಳನ್ನು ನಿರ್ಮಿಸಿದವರು. ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ದೇವಸ್ಥಾನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಬರುವ ಪರವೂರ ಭಕ್ತರಿಗೆ ಕಾಣುವಂತೆ ಕುಂಭಾಶಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗುಡ್ಡೆ ರಸ್ತೆಗೆ ಬೃಹತ್ ಸ್ವಾಗತ ಮಂಟಪ ಸುಂದರವಾಗಿ ನಿರ್ಮಿಸಿದರು. ತಾನು ಶಿಕ್ಷಣ ಪಡೆದ ಶಾಲೆಗಳ ಅಭಿವೃದ್ದಿಗೆ ನೆರವಾದರು. ಹಂಗ್ಲೂರಿನಲ್ಲಿ “ಸೂರಜ್ ಕುಂಡ” ಎಂಬ ಮನೆ ನಿರ್ಮಿಸಿದ ನಂತರ ಅದೇ ಮನೆಯ ಎದುರು ಸುಮಾರು 82 ಅಡಿ ಎತ್ತರದ ಬೃಹತ್ ಹನುಮಂತನ ವಿಗ್ರಹ ಸ್ಥಾಪಿಸಿ ಹನುಮ ಭಕ್ತರಲ್ಲಿ ಪ್ರೇರಣೆ ತುಂಬಿದರು. ಇದೇ ಸ್ಥಳದಲ್ಲಿ ಕ್ರೀಡಾ ಪಂದ್ಯವನ್ನು ನಡೆಸಿದರು. ಇಂದು ಸಮಾಜದ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ನೆರವು ನೀಡುವ ಮೂಲಕ ಸ್ಪೂರ್ತಿ ತುಂಬುತ್ತಿದ್ದಾರೆ. ಮುಂಬಯಿಯ ದೇವಾಡಿಗೆ ವೆಲ್ಪೇರ್ ಅಸೋಶಿಯನ್ ಇದರ ಗೌರವ ರಾಗಿದ್ದಾರೆ.ಕಾರ್ಯಕ್ರಮದ ವಿಶೇಷತೆ:ಜಾನಪದ ಕಲೆಯಾದ ಹೂವಿನ ಕೋಲು ಪ್ರದರ್ಶನ ಹಾಗು ಲಾವಣ್ಯ ಕಲಾವ್ರಂದ ಬೈಂದೂರು ಇವರಿಂದ ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕ ನಡೆಯಿತು.