“ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ” ಎಂಬುದು ನಾಣ್ಣುಡಿ. ಹಾಗೆಯೇ ಯಾವುದೇ ಸಮಾಜದ ಉನ್ನತಿಯ ಮೌಲ್ಯಮಾಪನವನ್ನು ಸ್ತ್ರೀ ವರ್ಗದ ಪ್ರಗತಿಯಿಂದ ಮಾಡಬಹುದು. ಸ್ತ್ರೀಯ ಅನೇಕ ರೂಪಗಳು ಒಬ್ಬ ಯಶಸ್ವಿ ಮನುಷ್ಯನ ಪೂರಕ ಶಕ್ತಿಯಾಗಿರುತ್ತದೆ.ಅತ್ಯಂತ ಮುಖ್ಯವಾಗಿ ಆಕೆಯ ತಾಯಿಯ ರೂಪ ಮಗುವನ್ನು ಒಬ್ಬ ಸಾಮಾಜಿಕ ಮನುಷ್ಯನನ್ನಾಗಿ ರೂಪಿಸುತ್ತದೆ. ಹಾಗೆಯೇ, ತಾಯಿಯಾದವಳ ಅರಿವು, ತಿಳಿವು, ಶಿಕ್ಷಣ ಎಷ್ಟು ಹೆಚ್ಚಿರುತ್ತದೋ ಅಷ್ಟೇ ಯಶಸ್ಸಿನ ಮನುಷ್ಯ ತಯಾರಾಗುತ್ತಾನೆ.ಹೇಗೆ ಶಿಲ್ಪಿಯ ಕೈಚಳಕದ ಅರಿವು ಆತ ತಯಾರಿಸಿದ ಕಲಾಕ್ರತಿಯಿಂದ ತಿಳಿಯಬಹುದು. ಹಾಗೆಯೇ, ಉತ್ತಮ ನಾಗರಿಕನ ಹಿಂದೆ ಉತ್ತಮ ತಾಯಿಯ ಸಂಪನ್ನತೆಯ ಅರಿವು ಉಂಟಾಗುತ್ತದೆ. ಅಂತೆಯೇ, ಉತ್ತಮ ಮನುಷ್ಯನಿಂದ ಉತ್ತಮ ಸಮಾಜ, ಉತ್ತಮ ಸಮಾಜದಿಂದ ಉತ್ತಮ ದೇಶವಾಗುವುದಕ್ಕೆ ಸ್ತ್ರೀ ಕಾರಣೀಭೋತಳಾಗುತ್ತಾಳೆ. ಆದ್ದರಿಂದ ಮೊದಲ ಗುರುವಾದ ತಾಯಿಯು ಒಬ್ಬಳು ಸ್ತ್ರೀ. ಆಕೆಯ ಕಾರ್ಯಶೀಲತೆಯು ಉತ್ತಮ ಸಮಾಜದ ತಳಹದಿಯಾಗುತ್ತದೆ.ಮಹಿಳೆಯು ಸಮಾಜದ ಮೂಲಸ್ತಂಭ ಎಂಬುದಕ್ಕೆ ಎರಡು ಮಾತಿಲ್ಲ. ನಮ್ಮ ಶ್ರೀಮಂತ ಸಂಸ್ಕ್ರತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಅಗ್ರಮಾನ್ಯ. ಆಧುನಿಕ ಮಹಿಳೆಯ ಕ್ರಿಯಾಶೀಲತೆ ಕೇವಲ ಸಂಸ್ಕ್ರತಿ, ಸಂಪ್ರದಾಯಕ್ಕೆ ಸೀಮಿತವಾಗಿರದೆ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಲು ಶಕ್ತಳು ಎಂದು ತೋರಿಸುತ್ತಿದ್ದಾಳೆ. ಆಧುನಿಕ ಮಹಿಳೆಯರ ಇತ್ತೀಚಿಗಿನ ಬೆಳವಣಿಗೆಯನ್ನು ಗಮನಿಸಿದರೆ ಈ ಮಾತು ನೂರಕ್ಕೆ ನೂರು ಸತ್ಯವೆನಿಸುತ್ತದೆ. ಈಗಿನ ಮಹಿಳೆಯರು ಕೇವಲ ಮೂಲಭೂತ ಕರ್ತವ್ಯಗಳಲ್ಲಿ ತಮ್ಮನ್ನು ಸೀಮಿತಗೊಳಿಸದೆ, ಪರಿವರ್ತನೆಯತ್ತ ದಾಪುಗಾಲನ್ನು ಇಡುತ್ತಿದ್ದಾಳೆ. ಇದನ್ನು ಸಮರ್ತಿಸಲು ನೂರಾರು ಉದಾಹರಣೆಗಳನ್ನು ಕೊಡಬಹುದು.
ಸಂಕ್ಷಿಪ್ತವಾಗಿ ಉದಾಹರಿಸುವುದಾದರೆ ಈಗಿನ ಆಧುನಿಕ ಮಹಿಳೆ ಪುರುಷನಿಗೆ ಸಮಾನವಾಗಿ ದುಡಿಯುತ್ತಿದಾಳೆ. ಇದು ಅವರ ವಿಶೇಷ ಪರಿವರ್ತನೆಯಿಂದ ಮಾತ್ರ ಸಾದ್ಯವೆನ್ನುವುದು ನೈಜ ಸತ್ಯ. ಒಂದು ವೇಳೆ ಮಹಿಳೆ ತನ್ನನ್ನು ತಾನು ಒಂದು ಸೀಮಿತ ಚೌಕಟ್ಟಿನಲ್ಲಿ ಇಡುತ್ತಿದ್ದಾರೆ. ಇಂದು ಪ್ರಸಿದ್ದಿ ಪಡೆದಿರುವ ಹತ್ತಾರು ಮಹಿಳೆಯರು ನಮಗೆಲ್ಲ ಅನಾಮಧೇಯರಾಗಿರುತ್ತಿದ್ದರು.ಆದ್ದರಿಂದ ನಮ್ಮ ಸಮಾಜದ ಮಹಿಳೆಯರು ಒಗ್ಗಾಟ್ಟಾಗಿ ತಮ್ಮ ಕಾರ್ಯಶೀಲತೆಯನ್ನು ತೋರಿಸಿದರೆ ಮಾತ್ರ ನಾವು ನೈಜ ಪರಿವರ್ತನೆಯನ್ನು ಪಡೆಯಬಹುದು. ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ನಲ್ಲಿ ಹಲವಾರು ವರ್ಷಗಳಿಂದ ಮಹಿಳಾ ವಿಭಾಗದ ಕೊರತೆ ಎದ್ದು ಕಾಣುತ್ತಿತ್ತು.
ಇದನ್ನರಿತ ನಮ್ಮ ದೇವಾಡಿಗ ಸಮಾಜದ ಕೆಲವು ಮಹಿಳೆಯರು ಒಟ್ಟಾಗಿ ಸೇರಿ ತಮ್ಮ ಬಿಡುವಿನ ಸಮಯದಲ್ಲಿ ತಾವಾಗಿಯೇ ಮುಂದೆ ಬಂದು “ಮಹಿಳಾ ವಿಭಾಗ”ವನ್ನು ರಚಿಸಿದರು. ದಿವಂಗತ ರಾಧಾಭಾಯಿ ಟೀಚರ್ ನೇತ್ರತ್ವದಲ್ಲಿ ರಚಿತವಾದ ಮಹಿಳಾ ವಿಭಾಗವು ಮಹಿಳಾ ವಿಕಸನಕ್ಕೆ ಪೂರಕವಾದ ಕಾರ್ಯವೈಖರಿಗಳನ್ನು ಮೈಗೂಡಿಸಿಕೊಂಡು ಇಂದು ಈ ಮಹಿಳಾ ವಿಭಾಗದ ಮೂಲೋದ್ದೇಶ ನಮ್ಮ ಸಮಾಜದ ಎಲ್ಲಾ ಸ್ಥರದ ಮಹಿಳೆಯರನ್ನು ಎದುರಿಗೆ ತಂದು ಅವರ ಮತ್ತು ಸಮಾಜದ ಏಳಿಗೆಗಾಗಿ ಉಪಯೋಗಿಸುವುದು. ಈಗ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವಿಭಾಗದ ಅಪೇಕ್ಷೆಯೇನೆಂದರೆ ನಮ್ಮ ಸಮಾಜದ ಮಹಿಳೆಯರು ತಮ್ಮ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಂಡು ಕ್ರೀಯಾಶೀಲರಾದರೆ ಇತರರಿಗೆ ಆದರ್ಶಪ್ರಾಯವಾಗಬಹುದು. ಇದರಿಂದ ಅವರ ಸ್ವ ವ್ಯಕ್ತಿತ್ವ ವಿಕಸನವಲ್ಲದೆ ಮುಂದಿನ ಪೀಳಿಗೆಗೆ ದಾರಿದೀಪವಾಗುವುದರಲ್ಲಿ ಎರಡು ಮಾತಿಲ್ಲ.
ಮಾನ್ಯರೇ, ನಮ್ಮ ಸಮಾಜದ ಮಹಿಳೆಯರಲ್ಲಿ ವಿನಂತಿಸಿಕೊಲ್ಲುವುದೆನೆಂದರೆ, ನಮ್ಮ ಮಹಿಳಾ ವಿಭಾಗಕ್ಕೆ ತಮ್ಮ ಸಂಪೂರ್ಣ ಸಹಕಾರವಲ್ಲದೆ ಸಲಹೆ ಸೋಚನೆಗಳನ್ನಿತ್ತು ಸಹಕರಿಸಿ. ಹಾಗೆಯೇ ನಿಮ್ಮ ಸಹಭಾಗಿತ್ವದಿಂದ ಸಂಘದ ಏಳಿಗೆಗಾಗಿ ಶ್ರಮಿಸುವುದು. ಈ ನಿಟ್ಟಿನಲ್ಲಿ ತಮ್ಮ ಯಾವುದೇ ಸಲಹೆ ಸೂಚನೆಗಳಿಗೆ ಮುಕ್ತ ಸ್ವಾಗತವಿದೆ.