ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಳು ತಾಲೂಕುಗಳಲ್ಲಿ ಕುಂದಾಪುರ ಮಾತ್ರ ಕನ್ನಡ ಭಾಷಿಕ ವಿಭಾಗವಾಗಿದೆ. ಇಲ್ಲಿ ನೆಲೆಸಿರುವ ದೇವಾಡಿಗ ಜನಾಂಗದವರು ಬಹುಕಾಲದಿಂದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥರಗಳಲ್ಲಿ ಹಿಂದುಳಿದವರು. ಇವರು ಶಾಂತಿಪ್ರಿಯರು. ನೆಮ್ಮದಿಯ ಬದುಕನ್ನು ಬಯಸುವವರು. ಜೀವನೋಪಾಯಕ್ಕಾಗಿ ಅನ್ಯರಂತೆ ದೇವಾಡಿಗ ಸಮುದಾಯದವರೂ ಮುಂಬೈಗೆ ವಲಸೆ ಬಂದರು. ಮುಂಬಯಿ ಪಟ್ಟಣದಲ್ಲಿ ನೆಲೆಸಿದ ನಮ್ಮೂರಿನ ಹಿರಿಯ ಸಮಾಜ ಬಾಂಧವರು ಸಂಘಟಿತರಾಗುವ ಸದುದ್ದೇಶವನ್ನು ಹೊಂದಿ ಕಾರ್ಯನಿರತರಾಗಿ ಮುಂದೆ “ಕುಂದಾಪುರ ತಾಲೂಕು ದೇವಾಡಿಗ ಮಹಾಜನ ಸಂಘ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಸ್ಥಾಪನೆ ಸುಮಾರು 50 ವರ್ಷಗಳ ಹಿಂದೆ ಆಗಿದ್ದು, ನಮ್ಮ ಸಂಘಕ್ಕೆ ಐದು ದಶಕಗಳ ಇತಿಹಾಸದ ದಾಖಲೆ ನೀಡಿದೆ. ಅಂದು ಪ್ರಾರಂಭಗೊಂಡ ಸಂಘದ ಕಾರ್ಯಕಲಾಪಗಳು ನಮ್ಮ ಸಂಘದ ಸದ್ರಿ ಕಚೇರಿಯಲ್ಲಿಯೇ ಜರಗುತ್ತಿದ್ದವು. ನಮ್ಮ ಹಿರಿಯರು ದೂರದ್ರಷ್ಟಿ, ಸೇವಾ ಮನೋಭಾವನೆ ಹೊಂದಿದವರು. ಆದರೆ, ಕಾಲಕ್ರಮೇಣ ಸಂಘದ ಚಟುವಟಿಕೆಗಳು ಕುಂಟಿತಗೊಂಡು ಕ್ರಮೇಣ ಸ್ಥಗಿತಗೊಂಡವು.ತುಳು ಭಾಷಿಕರ ‘ದೇವಾಡಿಗ ಸಂಘ’ ಮುಂಬೈಯಲ್ಲಿ ಸುಮಾರು ಎಂಟು ದಶಕಗಳ ಹಿಂದೆಯೇ ಸ್ಥಾಪಿಸಲ್ಪಟ್ಟಿತ್ತು.
ಈ ಸಂಘ ಮೊದಲು ‘ದೇವಾಡಿಗ ಸುಧಾರಕ ಸಂಘ’ ಎಂದಿದ್ದು, ಈಗ “ದೇವಾಡಿಗ ಸಂಘ” ಎಂಬ ಹೆಸರಿನಲ್ಲಿ ಉತ್ತಮ ಕಾರ್ಯಸಾಧನೆ ಮಾಡುತ್ತಿದೆ. ದೇವಾಡಿಗ ಸುಧಾರಕ ಸಂಘ ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ, ಕುಂದಾಪುರ ವಿಭಾಗದ ಕನ್ನಡ ಭಾಷಾ ದೇವಾಡಿಗ ಬಾಂಧವರನ್ನು ಒಗ್ಗೂಡಿಸುವಲ್ಲಿ ವಿಶೇಷ ಪ್ರಯತ್ನ ಮಾಡುವರೇ ವಿಫಲವಾಗಿತ್ತು. ಆ ಸಂಘವು ನಮ್ಮ ವಿಭಾಗದ ಕೆಲವು ವಿದ್ಯಾವಂತರನ್ನು ಸದಸ್ಯರನ್ನಾಗಿಸಿ, ಒಂದೆರಡು ವ್ಯಕ್ತಿಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದ ಉದಾಹರಣೆಗಳಿವೆ.ದೇವಾಡಿಗ ಸುಧಾರಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯತ್ವ ಪಡೆದ ನಮ್ಮ ಕನ್ನಡ ಭಾಷಿಕ ದೇವಾಡಿಗರಿಗೆ ಅನಾನುಕೂಲ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತಿತ್ತು.
ಸಂಘದ ಕಾರ್ಯಕಲಾಪಗಳು ತುಳು ಭಾಷೆಯಲ್ಲಿ ನಡೆಯುತ್ತಿತ್ತು. ಕನ್ನಡ ಭಾಷಿಕ ಸದಸ್ಯರ ಬೇಡಿಕೆಗೆ ಸ್ಪಂದಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಂದಾಪುರದ ವಿದ್ಯಾವಂತ ದೇವಾಡಿಗ ಬಾಂಧವರು ತಮ್ಮ ವಿಭಾಗದ ಪ್ರತ್ಯೇಕ ಸಂಘ ಸ್ಥಾಪನೆಯ ಕನಸು ಕಂಡರು.ತುಳು ಭಾಷಿಕರೇ ಆದ ದಿವಂಗತ ಶ್ರೀಮಾನ್ ಪಿ. ದಯಾನಂದ ದೇವಾಡಿಗರು, ದೇವಾಡಿಗ ಸುಧಾರಕ ಸಂಘದ ಮಾಜಿ ಅಧ್ಯಕ್ಷರು, ಅವರು ನಮ್ಮ ಕುಂದಾಪುರ ದೇವಾಡಿಗ ಬಾಂಧವರ ಭಾವನೆಗಳನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡವರಾಗಿದ್ದರು. ನಮ್ಮ ವಿಭಾಗದ ಬಾಂಧವರ ಭಾವನೆಗಳಿಗೆ ಮನಸಾರೆ ಸ್ಪಂದಿಸಿದವರು. ಶ್ರೀಮಾನ್ ದಯಾನಂದರ ಮಾರ್ಗದರ್ಶನದಿಂದ ಕುಂದಾಪುರ ವಿಭಾಗದ ದೇವಾಡಿಗ ಬಾಂಧವರು ತಮ್ಮದೇ ಆದ ಸಂಘವನ್ನು ಕಟ್ಟಬೇಕೆಂಬ ಸದುದ್ದೇಶದಿಂದ, ಎಂಟು ಮಂದಿ ವಿದ್ಯಾವಂತ ಬಾಂಧವರು ಈ ಸಾಧನೆಗೆ ಕಾಯಾ- ವಾಚಾ-ಮನಸಾ ಮುಂದಾದರು.
ಈ ನಿಟ್ಟಿನಲ್ಲಿ ಪ್ರಾರಂಭದಲ್ಲಿ ಶ್ರಮಿಸಿದ ಸಂಸ್ಥಾಪಕರು ಈ ಕೆಳಗಿನವರು…
೧. ಶ್ರೀ ನಾರಾಯಣ ಎನ್. ದೇವಾಡಿಗ.
೨. ಶ್ರೀ ಸುರೇಶ್ ವಿ. ದೇವಾಡಿಗ.
೩. ಶ್ರೀ ಗೋವಿಂದ ಎ. ದೇವಾಡಿಗ.
೪. ಶ್ರೀ ಆನಂದ ಎನ್. ದೇವಾಡಿಗ.
೫. ಶ್ರೀ ಕ್ರಷ್ಣ ಎನ್. ದೇವಾಡಿಗ.
೬. ಶ್ರೀ ರತ್ನಾಕರ ಕೆ. ದೇವಾಡಿಗ.
೭. ಶ್ರೀ ಶೀನ ಕೆ. ದೇವಾಡಿಗ.
೮. ಶ್ರೀ ಮಹಾಲಿಂಗ ಪಿ. ಕೆರ್ಗಾಲ್.
ಸುಮಾರು ಒಂದು ವರ್ಷ ಸತತ ಪ್ರಯತ್ನಶೀಲರಾಗಿ, ಮೇಲ್ಕಾಣಿಸಿದ ಸಂಸ್ಥಾಪಕರು ಕುಂದಾಪುರ ದೇವಾಡಿಗ ಬಾಂಧವರನ್ನು ಸಂಪರ್ಕಿಸಿ, ಸಂಘಟನೆಯ ಕರೆ ನೀಡಿ, ಮಾರ್ಚ್ 1987 ರಲ್ಲಿ ದಾದರ್ ನಲ್ಲಿ ಪ್ರಪ್ರಥಮ ಮಹಾಸಭೆಯನ್ನು ಕರೆದು ನೂತನ ಸಂಘಕ್ಕೆ ನಾಂದಿ ಹಾಡಲಾಯಿತು. ಈ ನೂತನ ಸಂಸ್ಥೆಗೆ ದೇವಾಡಿಗ ಅಸೋಸಿಯೇಶನ್ ಎಂದು ನಾಮಕರಣ ಮಾಡಲಾಯಿತು. ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡವರಲ್ಲಿ ಶ್ರೀ ಕೆ. ಕೆ. ದೇವಾಡಿಗ ಅವರನ್ನು ಅದ್ಯಕ್ಷರನ್ನಾಗಿಯೂ, ಶ್ರೀ ಎಸ್. ವಿ ದೇವಾಡಿಗರನ್ನು ಉಪಾದ್ಯಕ್ಷರನ್ನಾಗಿಯೂ, ಶ್ರೀ ಜಿ.ಎ. ದೇವಾಡಿಗ ಮತ್ತು ಶ್ರೀ ಕೆ.ಕೆ. ರತ್ನಾಕರ ಅವರನ್ನು ಜೊತೆಕಾರ್ಯದರ್ಶಿ ಗಳನ್ನಾಗಿಯೂ ಮತ್ತು ಶ್ರೀ ನಾರಾಯಣ ಏನ್. ದೇವಾಡಿಗರನ್ನು ಕೊಶಾಧಿಕಾರಿಯನ್ನಾಗಿಯೂ ಆಯ್ಕೆ ಮಾಡಲಾಯಿತು.ಸಂಘವು ತನ್ನ ಅಸ್ತಿತ್ವದ ಮೊದಲನೇ ವರ್ಷದಲ್ಲಿ ಒಂದು ಯಕ್ಷೆಗಾನ ಪ್ರದರ್ಶನವನ್ನು ಹಾಗೂ ಎರಡನೇ ವರ್ಷದಲ್ಲಿ ಒಂದು ‘ಸೊವೆನಿರ್’ (ಸ್ಮರಣ ಸಂಚಿಕೆ) ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿತು. ಪ್ರಾಥಮಿಕ ಹಂತದ ನಿಧಿ ಸಂಗ್ರಹಕ್ಕೆ ಕಾರ್ಯಕಾರಿ ಸಮಿತಿಯು ಪ್ರಯತ್ನಿಸಿದೆ.
ಈ ಸಂದರ್ಭದಲ್ಲಿ ನಮ್ಮ ಸಮಾಜದ ಅಗ್ರಗಣ್ಯ ಸ್ಥಾನದಲ್ಲಿರುವ ಮುಂಬೈ ಉದ್ಯಮಿ ಶ್ರೀಮಾನ್ ಸುರೇಶ್ ಡಿ. ದೇವಾಡಿಗ ಪಡುಕೋಣೆ ಹಾಗೂ ಪಡುಕೋಣೆಯವರೇ ಆದ ಮುಂಬಯಿಯ ಪ್ರತಿಷ್ಟಿತ ಹೋಟೆಲ್ ಉದ್ಯಮಿ ಶ್ರೀಮಾನ್ ಸುರೇಶ್ ಎಸ್. ಪೂಜಾರಿ ಈ ಮಹನೀಯರು ತುಂಬು ಹೃದಯದ ಪ್ರೋತ್ಸಾಹ ನೀಡಿ, ಸಂಘಕ್ಕೆ ಶುಭ ಕೋರಿದವರಾಗಿದ್ದಾರೆ. ಇವರಿಗೆ ಸಂಘದ ಹ್ರತ್ಪೂರ್ವಕ ಕ್ರತಜ್ಞತೆಗಳು. ಬಾಲ್ಯಾವಸ್ಥೆಯಿಂದ ಮುಂದುವರಿದು ಸಂಘವು ಇನ್ನೆರಡು ‘ಸೊವೆನಿರ್’ ಕಾರ್ಯಕ್ರಮಗಳನ್ನು ಆಯೋಜಿಸಿ, ನಿಧಿ ಸಂಗ್ರಹಕ್ಕೆ ಉತ್ತಮ ಅಡಿಪಾಯ ಹಾಕಲಾಯಿತು. ‘ಸೊವೆನಿರ್’ ಕಾರ್ಯಕ್ರಮಗಳ ಹೊರತಾಗಿ ಸಂಘವು ಯಕ್ಷೆಗಾನ ಪ್ರದರ್ಶನ ಮತ್ತು ಲಾಟರಿ ಯೋಜನೆಗಳನ್ನು ಏರ್ಪಡಿಸಿ, ಬಂಡವಾಳ ವ್ರದ್ಧಿಸುವ ಪ್ರಯತ್ನ ಮಾಡಲಾಯಿತು. ಈ ಮಹತ್ಕಾರ್ಯಗಳಲ್ಲಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ, ಸಂಘಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪ್ರಶಂಸನಿಯ ಪ್ರಮಾಣದಲ್ಲಿ ಜಾಹೀರಾತುಗಳನ್ನು ಸಂಗ್ರಹಿಸಿಕೊಟ್ಟು, ಹಾಲಿ ಅಧ್ಯಕ್ಷರಾದ ಶ್ರೀ ಸುಬ್ಬ ಜಿ. ದೇವಾಡಿಗರು ಸಂಘಕ್ಕೆ ಅಪಾರ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಕ್ರತಜ್ಞತಾಪೂರ್ವಕವಾಗಿ ಸ್ಮರಿಸಬೇಕಾಗಿದೆ.ಸಂಘದ ಕಾರ್ಯಚಟುವಟಿಕೆಗಳ ಮಧ್ಯೆ ಕಾರ್ಯಕರ್ತರಿಗೆ ಉದ್ವಿಗ್ನ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಅಂದು ಸಂಘಕ್ಕೆ ಸ್ವಂತ ಕಛೇರಿ ಇರಲಿಲ್ಲ. ನಮ್ಮ ಸದ್ಯದ ಕಛೇರಿಯು ಹಿಂದೆ ದೇವಾಡಿಗ ಬಾಂಧವರ ಸಾರ್ವಜನಿಕ ಕೋಣೆಯಾಗಿದ್ದು, ಇಲ್ಲಿ ನಮ್ಮ ಹಳೆ ಸಂಘದ ಕಾರ್ಯಕಲಾಪಗಳು ನಡೆಯುತ್ತಿದ್ದವು. ಆದರೆ ಮರುಸ್ಥಾಪನೆಗೊಂಡ ನೂತನ ಸಂಘಕ್ಕೆ ಸಭೆ ನಡೆಸುವಲ್ಲಿ ಕೋಣೆಯಲ್ಲಿ ವಾಸ್ತವ್ಯವಿದ್ದ ಸದಸ್ಯರು ಸಹಕರಿಸಲಿಲ್ಲ.
ಹೀಗಾಗಿ ಈ ಕೋಣೆಯ ಮೂಲ ಸದಸ್ಯರಾದ ಹಾಗೂ ದಶಕಗಳಿಂದ ಊರಿನಲ್ಲಿ ಜೀವನ ಸಾಗಿಸುತ್ತಿದ್ದ ಶ್ರೀ ಮಂಜ ದೇವಾಡಿಗರನ್ನು ಮುಂಬಯಿಗೆ ಕರೆಯಿಸಿ, ಅವರ ಸಮಕ್ಷಮ ಸಭೆ ನಡೆಸಿ, ಪ್ರಯತ್ನ ಮುಂದುವರಿಸಲಾಯಿತು. ಹಲವು ಸಭೆಗಳನ್ನು ನಡೆಸಿ, ಶ್ರೀ ಮಂಜ ದೇವಾಡಿಗರಿಗೆ ಆರ್ಥಿಕ ನೆರವನ್ನು ನೀಡಿ, ಸಾರ್ವಜನಿಕವಾದ ಸಮಾಜ ಬಾಂಧವರ ಈ ಕೋಣೆಯು ಸಂಘದ ಸೊತ್ತೆಂದು ದ್ರಢೀಕರಿಸಿಕೊಂಡು, ಕೋಣೆಯಲ್ಲಿ ವಾಸ್ತವ್ಯವಿದ್ದವರು ಸಂಘದ ನಿಯಮಾವಳಿಗಳಿಗೆ ಬದ್ಧರಾಗಿ, ಸಂಘಕ್ಕೆ ಅಧೀನರಾಗಿರಬೇಕು ಎಂಬ ಒಪ್ಪಂದಕ್ಕೆ ಸಹಿಹಾಕಲಾಯಿತು.ಸಂಘದ ಸಭೆಗಳು ಈ ಕಛೇರಿಯಲ್ಲಿ 1991 ರಿಂದ ನಡೆಯುತ್ತಬಂದಿದೆ. ಆದರೆ ಕೋಣೆಯ ಕೆಲವು ಸದಸ್ಯರ ಅಶಿಸ್ತು, ಹಿಂಸಾ ಪ್ರವ್ರತ್ತಿ, ಉಪಟಳ, ಕಿರುಕುಳಗಲಿಂದಾಗಿ ಕಾರ್ಯಕರ್ತರಿಗೆ ಪದೇ ಪದೇ ಪೊಲೀಸ್ ಠಾಣೆಯಲ್ಲಿ ದೂರು, ಕೋರ್ಟಿನಲ್ಲಿ ವ್ಯಾಜ್ಯ ಇತ್ಯಾದಿ ಸಂಘರ್ಷಕ್ಕೆ ಇಳಿಯುವುದು ಅನಿವಾರ್ಯವಾಯಿತು. ಈ ಸಂಘರ್ಷಗಳ ಮಧ್ಯೆ ಸಂಘವು ಲಂಬಾ ಬಿಲ್ಡಿಂಗ್ ನ ಮಾಲಕರನ್ನು ನೇರ ಭೇಟಿಮಾಡಿ ಅವರ ವಿರುದ್ಧ ವ್ಯಾಜ್ಯ ದಾಖಲಿಸಿ, ಕೋಣೆಯನ್ನು ಸಂಘದ ಹೆಸರಿನಲ್ಲಿ ದಾಖಲಿಸಿಕೊದಬೇಕೆಂದು ಸುಮಾರು ಹತ್ತು ವರುಷಗಳ ತನಕ ನಿರಂತರ ಪ್ರಯತ್ನ, ಹೋರಾಟ ನಡೆಸಲಾಯಿತು. ಕಾರ್ಯಕರ್ತರ ಸತತ ಪ್ರಯತ್ನಗಳ ಫಲವಾಗಿ, ಜನವರಿ 2002 ರಂದು ಕೋಣೆಯ ಹಕ್ಕನ್ನು ಕಾನೂನು ಬದ್ಧವಾಗಿ ಸಂಘಕ್ಕೆ ಹಸ್ತಾಂತರಿಸಿ, ಬಾಡಿಗೆ ಪಾವತಿಯನ್ನು ನೀಡಲಾಯಿತು. ಸಂಘದ ಒಂದು ದಶಕಕ್ಕೂ ಮೀರಿದ ಹೋರಾಟ, ಕೋಣೆಯನ್ನು ಕಬಳಿಸುವ ಪಟ್ಟಭದ್ರ ಹಿತಾಸಕ್ತಿಯ ಕೆಲವು ಸದಸ್ಯರ ಸಂಚನ್ನು ವಿಫಲಗೊಲಿಸಲಾಯಿತು.ಸಂಘವನ್ನು ಪಬ್ಲಿಕ್ ಟ್ರಸ್ಟ್ ಕಾಯಿದೆಯಡಿ ನೋಂದಾಯಿಸಲು ಪ್ರಯತ್ನ ನಡೆಯಿತು. ಆದರೆ ಸಂಘವು ಅಂದು ಸ್ವಂತ ವಿಳಾಸ ಹೊಂದಿಲ್ಲದ್ದರಿಂದ ಹಲವಾರು ಅಡಚಣೆಗಳನ್ನು ಎದುರಿಸಬೇಕಾಯಿತು. ಕೊನೆಗೆ ಜುಲೈ 1994 ರಲ್ಲಿ ಸಮಸ್ಯೆಗಳು ಇತ್ಯರ್ಥಗೊಂಡು, ಸಂಘವು ಅಧಿಕ್ರತವಾಗಿ ನೊಂದಾವಣಿಗೊಂಡಿತು. ನೊಂದಾವಣಿ ನಿಯಮಕ್ಕನುಗುಣವಾಗಿ, ಸಂಘವು “ದೇವಾಡಿಗ ವೆಲ್ಫೇರ್ ಅಸೋಸಿಯೇಶನ್” ಎಂಬ ಹೆಸರನ್ನು ಪಡೆಯಿತು.
ಸುಮಾರು 20 ವರ್ಷಗಳ ಕಾಲಾವಧಿಯಲ್ಲಿ ಸಂಘದ ಸದಸ್ಯತನದ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ವ್ರದ್ಧಿಯಾಗಿದ್ದು, ಈ ಕಾರ್ಯ ಮುಂದುವರಿಯಬೇಕಾಗಿದೆ. 2002 ರಲ್ಲಿ ಮಹಿಳಾ ವಿಭಾಗ ರಚನೆಗೊಂಡರೆ, 2005 ರಲ್ಲಿ ಯುವ ವೇದಿಕೆಯ ರಚನೆಯಾಯಿತು. ಈ ಎರಡೂ ವಿಭಾಗಗಳಿಂದ ಸಮಾಜ ಬಾಂಧವರ ಸಂಘಟನೆ ಹಾಗೂ ಬಲವರ್ಧನೆಯ ನಿಟ್ಟಿನಲ್ಲಿ ಯಶಸ್ವೀ ಕಾರ್ಯ ಸಾಧನೆ ನಡೆಯಿತು.ಎರಡು ವರ್ಷಗಳ ಅಸ್ತಿತ್ವದಲ್ಲಿ, ಸಕ್ರೀಯ ಕಾರ್ಯಕರ್ತರ ಅಭಾವ ಕಂಡುಬಂದಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಮುಂದೆ ಪದಾಧಿಕಾರಿಯ ಜವಾಬ್ಧಾರಿ ನಿಭಾಯಿಸುವ ಕಾರ್ಯಕರ್ತರು ತೀರಾ ವಿರಳ. ವಿದ್ಯಾಭ್ಯಾಸ ಪಡೆದ ಯುವಕ, ಯುವತಿಯರ ಸಂಖ್ಯೆ ನಮ್ಮ ಸಮಾಜದಲ್ಲಿ ಹೆಚ್ಚುತ್ತಿದ್ದರೂ, ಸಂಘದ ಕೆಲಸದಲ್ಲಿ ಪಾಲ್ಗೊಳ್ಳುವವರೇ ಸಂಕೋಚ ಭಾವನೆ ಕಂಡುಬರುತ್ತಿರುವುದು ತೀರಾ ವಿಷಾದಕರವಾಗಿದೆ. ಹೀಗಾಗಿ, ನಮ್ಮ ಸಂಘದಲ್ಲಿ ಎರಡು ದಶಕಗಳಿಂದಲೂ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಕೆಲವು ಮಹನೀಯರಿದ್ದಾರೆ.
ಈ ಕಾರ್ಯಕರ್ತರ ಅಮೋಘ ಸೇವೆಗೆ ಸಂಘವು ಹ್ರತ್ಪೂರ್ವಕ ಕ್ರತಜ್ಞತೆಗಳನ್ನು ಸಲ್ಲಿಸುತ್ತದೆ.ನಮ್ಮ ಸಂಘದ 20 ವರ್ಷಗಳ ಅಸ್ಥಿತ್ವದಲ್ಲಿ ಸರ್ವಶ್ರೀಗಳಾದ ಕ್ರಷ್ಣ ದೇವಾಡಿಗ, ಸುರೇಶ್ ದೇವಾಡಿಗ, ಜೆ.ಡಿ. ಶ್ರೀನಿವಾಸ್, ಗೋವಿಂದ ದೇವಾಡಿಗ, ಗೋಪಾಲ ದೇವಾಡಿಗ ಮತ್ತು ಸುಬ್ಬ ದೇವಾಡಿಗ ಇವರುಗಳು ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರು. ಶ್ರೀ ಸುಬ್ಬ ಜಿ. ದೇವಾಡಿಗರು ಹಾಲಿ ಅಧ್ಯಕ್ಷರಾಗಿದ್ದು, ಸುದೀರ್ಘ ಕಾಲದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಸುರೇಶ್ ಡಿ. ಪಡುಕೋಣೆಯವರು ಸಂಘದ ಗೌರವಾನ್ವಿತ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಹಾಗೆಯೇ ಸರ್ವಶ್ರೀಗಳಾದ ಗೋವಿಂದ ದೇವಾಡಿಗ, ಮಂಜು ಬಿ. ದೇವಾಡಿಗ ಮತ್ತು ಪ್ರಭಾಕರ ದೇವಾಡಿಗ ಇವರುಗಳು ಸುದೀರ್ಘ ಕಾಲ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.ಸಂಘವು ವಿವಿಧ ಸಮಾಜಕಲ್ಯಾಣ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದು, ವರ್ಷಕ್ಕೊಮ್ಮೆ ಮಹಾಸಭೆ ಮತ್ತು ವಾರ್ಷಿಕೋತ್ಸವವನ್ನು ನೆರವೇರಿಸುವ ಸಂಪ್ರದಾಯ ಹೊಂದಿದೆ. ಪ್ರತಿಭಾ ಪುರಸ್ಕಾರ, ಶಿಕ್ಷಣ ಸಹಾಯ, ಸಾಂಸ್ಕ್ರತಿಕ ಮತ್ತು ಮನೋರಂಜನಾ ಕಾರ್ಯಕ್ರಮ, ವೈದ್ಯಕೀಯ ನೆರವು, ಪ್ರಕ್ರತಿ ವಿಕೋಪ ಸಂದರ್ಭಗಳಲ್ಲಿ ನೆರವು ಹೀಗೆ ಹಲವಾರು ಸಮಾಜ ಸೇವಾ ಚಟುವಟಿಕೆಗಳು ಜಾರಿಯಲ್ಲಿವೆ. ವಾರ್ಷಿಕೋತ್ಸವ ದಿನವಿಡೀ ಜರಗುವ ಕಾರ್ಯಕ್ರಮವಾಗಿದ್ದು, ಊಟ, ಬಾಡಿಗೆ, ಪ್ರತಿಭಾ ಪುರಸ್ಕಾರ ಇತ್ಯಾದಿಗಳ ಖರ್ಚು ಸುಮಾರು ರೂ.50,000/- ಕ್ಕೂ ಮೀರುತ್ತದೆ. ಸಮಾಜ ಬಾಂಧವರ ಸಂಪರ್ಕ, ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕವಾಗಿ ಮಕ್ಕಳಿಗೆ, ಯುವ ವ್ರಂದಕ್ಕೆ ಪ್ರೋತ್ಸಾಹ ಇತ್ಯಾದಿ ದ್ರಷ್ಟಿಕೊನಗಳಿಂದ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ.
ಸಮಾಜ ಬಾಂಧವರು ಈ ಸಾಮಾಜಿಕ ಚಟುವಟಿಕೆಗಳ ಔಚಿತ್ಯವನ್ನು ಅರಿತು, ತನು-ಮನ-ಧನದಿಂದ ಸಂಘಕ್ಕೆ ಸಹಕರಿಸಿದಲ್ಲಿ ಸಂಘವನ್ನು ಉಳಿಸಿ, ಬೆಳೆಸಬಹುದು.ಭವಿಷ್ಯದಲ್ಲಿ ಒಂದು ಸಮಾಜ ಭವನ ಕಟ್ಟಬೇಕೆಂಬ ಕನಸು ಸಂಘ ಹೊಂದಿದೆ. ಕನಸು ಸಂಕಲ್ಪವಾಗಬೇಕು, ಸಂಕಲ್ಪ ಕಾರ್ಯರೂಪಕ್ಕೆ ಬರಬೇಕು. ಆಗ ಮಾತ್ರ ಕನಸು ನನಸಾಗಲು ಸಾದ್ಯ. ಈ ನಿಟ್ಟಿನಲ್ಲಿ ಸಮಸ್ತ ಸಮಾಜ ಬಾಂಧವರ ತುಂಬು ಹೃದಯದ ಬೆಂಬಲ, ಪ್ರೋತ್ಸಾಹ ಮತ್ತು ಸಹಕಾರ ಅಗತ್ಯವಿದೆ. ಇಂದು ಕಾಲ ಬದಲಾಗಿದೆ. ಯಾವುದೇ ಸಮುದಾಯದ ಸಂಘಟನೆ ತೀರಾ ಅವಶ್ಯಕವಾಗಿದೆ. ಪ್ರತಿಯೊಬ್ಬ ಸಮಾಜ ಬಾಂಧವರು ಎಚ್ಚೆತ್ತು, ತನ್ನ ಸಾಂಘಿಕ ಕರ್ತವ್ಯ ಹಾಗೂ ಹೊಣೆಯನ್ನು ನಿಭಾಯಿಸುವ ಸಮಯ ಇದಾಗಿದೆ. ಸಂಘವನ್ನು ಉಳಿಸಿ, ಬೆಳೆಸುವುದು ಸಮಸ್ತ ಸದಸ್ಯರ ಕೈಯ್ಯಲ್ಲಿದೆ. ಬನ್ನಿ, ನಾವೆಲ್ಲರೂ ಸಂಘಟಿತರಾಗೋಣ. ಬಲವರ್ಧನೆಗೊಂಡು, ಸಮಾಜದ ಕಲ್ಯಾಣಕ್ಕಾಗಿ, ಸರ್ವತೋಮುಖ ಅಭಿವ್ರದ್ಧಿಗಾಗಿ ದುಡಿಯೋಣ, ಇತರರಿಗೆ ಮಾದರಿಯಾಗೋಣ.