ನಮ್ಮ ಅಧ್ಯಕ್ಷರ ಬಗ್ಗೆ

Spread the News...

ನಮ್ಮಅಧ್ಯಕ್ಷರು…..

ಶ್ರೀಯುತ ಸುಬ್ಬ ಜಿ. ದೇವಾಡಿಗರು ಇಂದು ನಮ್ಮ ದೇವಾಡಿಗ ಸಮಾಜದ ಓರ್ವ ಗಣ್ಯ ವ್ಯಕ್ತಿಯಾಗಿದ್ದಾರೆ. ಇವರು ಬಾಲ್ಯದಿಂದಲೇ ಕಠಿಣ ಪರಿಶ್ರಮಕ್ಕೆ ಒಳಗಾದವರು. ಕುಟುಂಬದ ಆರ್ಥಿಕ ದುಸ್ತಿತಿಯ ಒತ್ತಡಕ್ಕೆ ಒಳಗಾಗಿ, ಬಾಲ್ಯದಲ್ಲಿ ಮಕ್ಕಳಿಗೆ ಎಷ್ಟು ಸುಖ ಸಿಗಬೇಕೋ ಅದನ್ನು ಕೊಂಚವೂ ಕಾಣದೆ, ಮನಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕೆಂಬ ಆಸೆಯಿದ್ದರೂ ಅದಕ್ಕೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಿರಿಯರಿಂದಲೂ ಪ್ರೋತ್ಸಾಹ ಸಿಗದೇ ಮನದಲ್ಲಿ ನೊಂದು ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಬೇಕು ಎಂಬ ಛಲದಿಂದ ಅತೀ ಚಿಕ್ಕ ಪ್ರಾಯದಲ್ಲ್ಲೇ ತಮ್ಮ ಚಿಕ್ಕ ತಂದೆಯವರ ಆಶ್ರಯದಲ್ಲಿ 1953ನೇ ಇಸವಿಯಲ್ಲಿ ಮುಂಬಯಿಯತ್ತ ಪ್ರಯಾಣ ಬೆಳೆಸಿದರು.ಶ್ರೀ ಸುಬ್ಬ ಜಿ. ದೇವಾಡಿಗರು ಕುಂದಾಪುರದ ಗುಜ್ಜಾಡಿ ಗ್ರಾಮದ ಕೊಡಪಾಡಿ ಎಂಬಲ್ಲಿ ಶ್ರೀಯುತ ಗೋವಿಂದ ಮತ್ತು ಶ್ರೀಮತಿ ಚಂದು ದಂಪತಿಯ 4 ಹೆಣ್ಣು, 4 ಗಂಡು ಮಕ್ಕಳಲ್ಲಿ ಹಿರಿಯವರಾಗಿ 1943 ನೇ ಮಾರ್ಚ್ ತಿಂಗಳ 6ನೇ ತಾರೀಕಿನಂದು ಜನಿಸಿದರು. ಚಿಕ್ಕಂದಿನಿಂದಲೇ ಇವರ ಕುಶಾಗ್ರ ಬುದ್ದಿ, ಸ್ನೇಹಮಯ ಸ್ವಭಾವ, ಜನರೊಂದಿಗೆ ಆಕರ್ಷಣೆ, ವಿನೋದಮಯ ಮಾತು ಇವರನ್ನು ತಾನಾಗಿಯೇ ಗುರುತಿಸಿಕೊಳ್ಳುವಂತೆ ಮಾಡಿತು. ಈ ಎಲ್ಲಾ ವಿಶಿಷ್ಟ ಗುಣಗಳಿಂದ ಮುಂಬಯಿಯಲ್ಲಿ ನೌಕರಿಯನ್ನು ದೊರಕಿಸಿಕೊಳ್ಳಲು ಇವರಿಗೆ ಕಷ್ಟವಾಗಲಿಲ್ಲ. ಇವರು ರಮೇಶ್ ಟೈಲರ್ಸ್ ಇವರಲ್ಲಿ ಸುಮಾರು 25 ವರ್ಷಗಳ ಕಾಲ ನೌಕರಿ ಮಾಡಿದರು. ದಿನದಿಂದ ದಿನಕ್ಕೆ ತನಗೆ ಸಿಕ್ಕಿದ ನೌಕರಿಯಲ್ಲಿ ಸಮಾಧಾನವನ್ನು ಕಂಡುಕೊಂಡರು, ಮುಂದೊಂದು ದಿನ ತಾನು ಎತ್ತರಕ್ಕೇರುವ ಯಾವುದಾದರೂ ಉದ್ಯೋಗವನ್ನು ಹುಡುಕಿಕೊಳ್ಳಬೇಕು ಎನ್ನುವ ಆಸೆ ಅವರಿಗೆ ಮೂಡಿತ್ತು. ತಾನೇನು ಮಾಡಬೇಕೆಂದು ಬಹಳವಾಗಿ ವಿಚಾರ ಮಾಡಿದ ನಂತರ ಅವರಿಗೆ ಹೊಳೆದದ್ದು ಬಟ್ಟೆಯ ವ್ಯಾಪಾರ. ಅದರಲ್ಲಿಯೇ ಆಸಕ್ತಿ ವಹಿಸಿದರು.ಮುಂಬಯಿ ಮಹಾನಗರದ ಬೈಕಲಾದಲ್ಲಿ 1975 ನೇ ಇಸವಿ, ಜುಲೈ 16 ರಂದು ಮಹೇಶ್ ಟೈಲರ್ಸ್ ಎಂಬ ಅಂಗಡಿಯನ್ನು ತೆರೆದರು.ಬಿಡುವಿಲ್ಲದೇ ದುಡಿಯುವ ಅವರ ಧೋರಣೆಯಿಂದ ಅವರು ಕೆಲವೇ ಸಮಯದೊಳಗೆ ಓರ್ವ ಜನಪ್ರಿಯ ವ್ಯಾಪಾರಿಯಾಗಿ ಪರಿಸರದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಇದು ಅವರ ಉದ್ಯೋಗ ವ್ರದ್ದಿಗೆ ಬಹಳ ಅನುಕೂಲವಾಯಿತು. ಇವರ ಆಪ್ತರ ಸಲಹೆಯಂತೆ ಕೆಲವೇ ಸಮಯದೊಳಗೆ 1978ನೇ ಇಸವಿಯಲ್ಲಿ ವಿಲೇಪಾರ್ಲೆಯ ಅಗರ್ವಾಲ್ ಮಾರ್ಕೆಟ್ ನಲ್ಲಿ ಇನ್ನೊಂದು ಅಂಗಡಿಯನ್ನು ಮಹೇಶ್ ಟೈಲರ್ಸ್ ಎಂಬ ಹೆಸರಿನಲ್ಲಿಯೇ ತೆರೆದರು.ಅವರು ತಮ್ಮ ವ್ರತ್ತಿ ಶ್ರೇಷ್ಟತೆಯಿಂದ ಎರಡೂ ವಲಯಗಳಲ್ಲಿ ಪ್ರಸಿದ್ಧಿಗೊಂಡರು. ಸರಳ ಸ್ವಭಾವದ ಶ್ರೀಯುತರು ಬಡ ಬಗ್ಗರ ಬಗ್ಗೆ ಅನುಕಂಪ, ಸಂಘ ಸಂಸ್ಥೆಗಳ ಬಗ್ಗೆ ಆಸಕ್ತಿ, ಸಮಾಜದ ಏಳಿಗೆಯ ತುಡಿತ, ತಾನು ಇತರರ ಕೆಲಸಕ್ಕೆ ಒದಗಬೇಕು ಎಂಬ ಮಿಡಿತಗಳನ್ನು ಹೊಂದಿರುವುದಲ್ಲದೆ, ಧಾರ್ಮಿಕತೆಯಲ್ಲಿಯೂ ವಿಶೇಷವಾದ ಶ್ರದ್ಧೆಯನ್ನು ಹೊಂದಿದವರಾಗಿದ್ದಾರೆ.ಇವರು ಸಾಮಾನ್ಯವಾಗಿ ಸಣ್ಣ ಪುಟ್ಟ ಕಷ್ಟ ದುಃಖಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ಯಾವಾಗಲೂ The show  Must go on ಎನ್ನುವ ಆಶಾವಾದಿ ಮನುಷ್ಯರಾಗಿದ್ದಾರೆ. ನಾವೆಲ್ಲಾ ಇವರ ಕುಟುಂಬದವರೆಲ್ಲರಿಗೂ ಸದಾ ಆರೋಗ್ಯ, ಶುಭಕಾಮನೆಗಳನ್ನು ಹಾರೈಸೋಣ.

 

:- ಎಸ್. ವಿ ದೇವಾಡಿಗ